ಸರ್ವಂ ಖಲ್ವಿದಂ ------------------------------------------ ಬೆಳದಿಂಗಳ ಅಂಗಳದಲಿ ಅಂದು ಗುರುವಾರ ಮಾಡಿ ಫಳಾರ, ಕೂತಿರುವೆ ನಾನು ಕಟ್ಟಿಗಾನಿಸಿ ಬ್ರಹ್ಮಾಂಡದ ಗೂಢಾಂಡದಲಿ ತಲೆ ತೊಡಗಿಸಿ. ಮಾರು ದೂರದಲಿ ತುಳಸಿ ಕಟ್ಟೆ ಬದಿಯಲಿ ಸತ್ತಂತೆ ಬಿದ್ದಿರುವ ಮರಿ ಗುಬ್ಬಿ. ನೀರೂಣಿಸಿ ನೋಡಲೇ? ಹುಟ್ಟು ಪರಿಜು ಇರಲಿ ಬಿಡು ಅಲ್ಲೇ ಗಲೀಜು. ನನದಲ್ಲದ ಋಣ ಇಂದಲ್ಲ ನಾಳೆ ಆಗುವದು ಹೆಣ. ಮಣ ಕಟ್ಟಿಗೆಯ ಬಿರುಕಿನಲ್ಲಿ ಕಾದು ಕುಳಿತಿರುವ ಸರ್ಪ ಸರ ಸರ ಹರಿದು ಚಕ ಚಕ ಸುಲಿದು ಗಬ ಗಬ ಮುಕ್ಕುವಾಶೆಯ ಉರಗ. ಮಾಡಲೇನು ನಾನು? ಹೋಗಿ ಹೊಡೆಯಲೇ ಹಂತಕನ? ಕಾಯಲೇ ಮರಣಕೆ ತುತ್ತಾದವನ? ಕರೆದು ಯಾರನಾದರೂ ಜಾರಿಸಲೇ ನನ್ನ ಜವಾಬುದಾರಿಯನ? ಏನೂ ಮಾಡಲಾಗಲಿಲ್ಲಾ ಅಂದು ಬರೆದು ತೀರಿಸಿದೆ ಹೊಣೆ ಇಂದು. ಅದ ಮಾಡಿದವನೆ ಅಲ್ಲವೆ ಇದ ಮಾಡಿದವನು? ಇದ ಮಾಡಿದವನೇ ಅಲ್ಲವೇ ನನ್ನನ್ನು ಮಾಡಿದ್ದು? ತಪ್ಪು ಅವನೊಬ್ಬನದೇ ಸರ್ವಂ ಖಲ್ವಿದಂ.